ಮಲೆನಾಡ ಮಡಿಲು 'ಶಿರಸಿ'ಯ ಹೆಮ್ಮೆಯ ಕಲಾವಿದೆ ವಿದುಷಿ ಕು. ಮಂಜುಶ್ರೀ. ವಿ. ಭಾರತದ ನೃತ್ಯ ಪ್ರಾಕಾರಗಳಲ್ಲಿ ಭರತನಾಟ್ಯಕ್ಕೆ ಉನ್ನತ ಸ್ಥಾನವಿದೆ. 'ನೃತ್ಯ ಸೇವಾ ಅವಧಾರಯ' ಎಂದು ಹೇಳಿರುವುದು ದೇವರಿಗೆ ನಾಟ್ಯ ಸೇವೆಯ ಮೇಲೆ ಪ್ರೀತಿ ಎಂಬ ಕಾರಣಕ್ಕೇ. ಕಲಾಪ್ರಿಯ ಹಾಗೂ ಸುಸಂಸ್ಕೃತ ಕುಟುಂಬದ ಶ್ರೀ. ವೆಂಕಟ್ರಮಣ ಎಂ ಹಾಗೂ ಶ್ರೀಮತಿ ರೇಣುಕಾ ಅವರ ಪುತ್ರಿ ಮಂಜುಶ್ರೀ. ವಿ ತಮ್ಮ ಆರರ ಎಳೆಯ ವಯಸ್ಸಿನಲ್ಲೇ ನೃತ್ಯವನ್ನು ಕಲಿಯಲು ಆರಂಬಿಸಿದರು. ತಂದೆ-ತಾಯಿಯರ ಪ್ರೋತ್ಸಾಹ, ಹಾಗೂ ಉತ್ತಮ ಗುರುಗಳ ಮಾರ್ಗದರ್ಶನ ದೊರಕಿತು, ಜೊತೆಗೆ ತಮ್ಮ ಕpಣ ಪರಿಶ್ರಮದ ಮೂಲಕ ಭರತನಾಟ್ಯ, ಕುಚುಪುಡಿ, ಹಾಗೂ ಮೋಹಿನಿ ಅಟ್ಟಂ ಕಲಾ - ಪ್ರಾಕಾರಗಳನ್ನೆಲ್ಲ ಶೃದ್ಧೆಯಿಂದ ಕಲಿತರು. ಈಗ ಕಲಾಪ್ರಸಾರ ನಿರತರಾಗಿರುವ ಮಂಜುಶ್ರೀ ಅವರು ನೃತ್ಯ ಪ್ರದರ್ಶನ, ಬರವಸೆಯ ಕುಡಿಗಳಿಗೆ ಮಾರ್ಗದರ್ಶನ ಮಾಡುತ್ತ ನಟರಾಜನ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗುರುಗಳು: ವಿದುಷಿ ಶ್ರೀಮತಿ. ಸೀಮಾ ಭಾಗವತ, ವಿದುಷಿ. ಶ್ರೀಮತಿ ಸಹನಾ ಭಟ್, ವಿದುಷಿ ಶ್ರೀಮತಿ ಸತ್ಯಭಾಮಾ ಕುಟ್ಟಿ, ಮತ್ತು ವಿಧ್ವಾನ್ ಶ್ರೀ. ಜನಾರ್ಧನ ಅಯ್ಯರ್ ಇವರೆಲ್ಲರ ಮಾರ್ಗದರ್ಶನ ಪಡೆದಿದ್ದಾರೆ ಮಂಜುಶ್ರೀ. 2006ರ ಮಾರ್ಚ್ ಐದರಂದು ರಂಗಪ್ರವೇಶ ಮಾಡಿದ ನಂತರ ಸಾಧನೆಯ ದಿಟ್ಟ ಹಾದಿಯಲ್ಲಿ ನಡೆದವರು ಮಂಜುಶ್ರೀ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಓದುತ್ತಿರುವಾಗಲೇ ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯೋತ್ಸವದಲ್ಲಿ ಬಂಗಾರದ ಪದಕ ಅರಸಿಬಂತು, ಹಾಗೆಯೇ ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಹಾಗೂ 'ವಿಧ್ವತ್' ಶಿಕ್ಷಣವನ್ನೂ ಪಡೆದರು. ಅಂದಹಾಗೆ ಮಂಜುಶ್ರೀ ಸೋಷಿಯಾಲಜಿ ಎಂ.ಎ ಪದವೀಧರೆ ಕೂಡ!
ದೇಶ-ವಿದೇಶಗಳ ವಿವಿದೆಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿ ಕಲಾರಸಿಕರ ಹೃದಯ ಗೆದ್ದಿದ್ದಾರೆ ಮಂಜುಶ್ರೀ. ಪ್ರಖ್ಯಾತ ಮೈಸೂರು ದಸರಾ, ಬನವಾಸಿಯ ಕದಂಬೋತ್ಸವ, ಕರಾವಳಿ ಉತ್ಸವ, ಚಾಲುಕ್ಯೋತ್ಸವ, ಶರನ್ನವರಾತ್ರಿ ಉತ್ಸವ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ, ಗುಜರಾತಿನಲ್ಲಿ ನಡೆದ ಸಾಂಸ್ಕೃತಿಕ ಸಮ್ಮೇಳನ, ಕೇರಳದ ಕಿಂಕಿಣಿ ಉತ್ಸವ, ಮುಂಬೈಯಲ್ಲಿ ನಡೆದ ಮಲ್ಹಾರ ಉತ್ಸವ, ಜೈಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಉತ್ಸವ, ಮತ್ತು ಭುವನೇಶ್ವರದ ಉತ್ಕರ್ಷ ಉತ್ಸವ ಮೊದಲಾದವುಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ರಾಜ್ಯದಲ್ಲಿ ಶಿರಸಿ, ಮೈಸೂರು, ಬೆಂಗಳೂರು, ಗುಲ್ಬರ್ಗ, ಕೊಲ್ಲೂರು, ಉಡುಪಿ, ಮಡಿಕೇರಿ, ಬಾದಾಮಿ ಹಾಗೂ ಮತ್ತಿತರೆಡೆ ನಾಟ್ಯ ಪ್ರದರ್ಶನಗೈದಿದ್ದಾರೆ. ಬಹರೈನ್ ದೇಶದ ಮನಾಮದಲ್ಲಿ ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ - 2006 ಮತ್ತು ಕುವೈತ್ ಅಲ್ಲಿ ನಡೆದ ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ - 2007ರಲ್ಲಿ ಭಾಗವಹಿಸಿ ವಿದೇಶಿ ನೆಲದಲ್ಲೂ ಅಪ್ಪಟ ಭಾರತೀಯ ಕಲೆಯನ್ನ ಪ್ರಚುರಪಡಿಸಿದ್ದಾರೆ.
ಬಿರುದು - ಸಮ್ಮಾನಗಳು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಟಾನವು 'ಆರ್ಯಭಟ ಪ್ರಶಸ್ತಿ' ನೀಡಿ ಗೌರವಿಸಿದೆ, ಡಾ. ಪಂಡಿತ ಪುಟ್ಟರಾಜ ಯುವ ಪ್ರತಿಭಾ ಪುರಸ್ಕಾರ ರಾಜ್ಯ ಪ್ರಶಸ್ತಿ, ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿ, ಸಾಧನಾ ರತ್ನ, ನಾಟ್ಯ ಮಯೂರಿ,ಕರುನಾಡ ಸಿರಿ, ಕರುನಾಡಿನ ಹೆಮ್ಮೆಯ ರತ್ನ, ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿಗಳು ಕಲಾವಿದೆಯ ಸಾಧನೆಯನ್ನ ಗುರುತಿಸಿ ಮುಡಿಯೇರಿವೆ.
ಮಂಜುಶ್ರೀಯವರು ನೂಪುರ ನೃತ್ಯ ಕುಟೀರ ಸಂಸ್ಥೆಯ ಸ್ಥಾಪಕ - ನಿರ್ದೇಶಕಿ, ಇನ್ನೂರಕ್ಕೂ ಹೆಚ್ಚು ನೃತ್ಯಾಸಕ್ತ ವಿದ್ಯಾರ್ಥಿಗಳ ಮಾರ್ಗದರ್ಶನದ ಹೊಣೆ ಹೊತ್ತಿದ್ದಾರೆ. ಇವರ ವಿದ್ಯಾರ್ಥಿಗಳು ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ನೃತ್ಯ-ತಾಳ ಪರೀಕ್ಷೆ, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ನೃತ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರು ನಿರ್ದೇಶಿಸಿದ ಅನೇಕ ನೃತ್ಯ - ರೂಪಕಗಳು ಕಲಾವಿಮರ್ಶಕರಿಂದ ಮೆಚ್ಚುಗೆ ಪಡೆದಿರುತ್ತವೆ. ಬೆಂಗಳೂರಿನ ಗಾಯನಸಮಾಜದಲ್ಲಿ ಕಳೆದ ಡಿಸೆಂಬರ್ 1 ರಂದು ರಿಯಲ್'ಗುರು.ಕಾಂ ಪ್ರಸ್ತುತಪಡಿಸಿದ 'ಕೊಳಲು - ಕಿಂಕಿಣಿ - ಕಲ್ಪ' ಕಾರ್ಯಕ್ರಮದಲ್ಲಿ ಮಂಜುಶ್ರೀ ತಮ್ಮ ವಿದ್ಯಾರ್ಥಿನಿಯರ ಜತೆ ನೀಡಿದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತ್ತು. ನೃತ್ಯವನ್ನೇ ಉಸಿರಾಗಿಸಿಕೊಂಡಿರುವ ಮಂಜುಶ್ರೀ 'ನೂಪುರ ನೃತ್ಯ ಕುಟೀರ'ದ ಮೂಲಕ ಎಲ್ಲೆಡೆ ಕಲೆಯ ಕಂಪನ್ನು ಸೂಸಬೇಕೆಂದುಕೊಂಡಿದ್ದಾರೆ. ಬಡ, ಅಂಗವಿಕಲ, ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೂ ನೃತ್ಯಾಭ್ಯಾಸ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಮಂಜುಶ್ರೀಯವರ ಕನಸು - ಸಾಕಾರವಾಗಲೆಂದು ಹಾರೈಸೋಣ ಅಲ್ಲವೇ? ಮಿಂಚಂಚೆ: manjushreevnaik@gmail.com.
ಈ ಬರಹ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ: Read Article on Kannada Prabha
- ಗುರುಪ್ರಸಾದ ಹೆಗಡೆ
Nimma Baraha Shaili Chennagide.. Tumba kushi aytu majushri avara bagge kooda odi. Pratibhe galanna parichayisi :) Shubhavaagali..
ಪ್ರತ್ಯುತ್ತರಅಳಿಸಿ