ಗುರುವಾರ, ಮಾರ್ಚ್ 10, 2011

Software ಪ್ರಸಂಗ

ಹೆಂಡತಿ ನಸುಕಿನಲಿ ಎದ್ದು ನೋಡಿದಾಗ ಗಂಡ ಸಿಟ್ಟಿನಿಂದ ಅಡುಗೆಮನೆಯಲ್ಲಿ ಶತಪತ ಹಾಕುತ್ತಿರುವುದು ಕಾಣಿಸಿತು. 
ಅವನಿಗೆ ಹಸಿವಾಗಿದೆಯೆಂದೂ, ಆತ ಏನೋ ಹುಡುಕುತ್ತಿರುವನೆಂದು ಎಲ್ಲಕ್ಕಿಂತ ಮಿಗಿಲಾಗಿ ಯಾವುದೋ ವಿಚಾರಕ್ಕೆ  ಬೇಜಾರು ಮಾಡಿಕೊಂಡಂತೆಯೂ ಇತ್ತು ಮುಖಬಾವ. ಅಂದಹಾಗೆ ಗಂಡ ಸಾಫ್ಟ್ವೇರ್ ಇಂಜಿನಿಯರ್ ... 

ಹೆಂಡತಿ: ಏನಾಯ್ತು ಡಿಯರ್? ಪ್ರೊಗ್ರಾಮ್(code) ವರ್ಕ್ ಆಗ್ತಾ ಇಲ್ವಾ?. 
ಗಂಡ: ವರ್ಕ್ ಆಗ್ತಾ ಇತ್ತು, ರಾತ್ರಿ ಪೂರ್ತಿ ಕೂತು ಬರೆದೆ ಬೆಳಿಗ್ಗೆವರೆಗೆ, ಕರೆಕ್ಟ್ ಆಗಿ ವರ್ಕ್ ಆಯ್ತು.
ಹೆಂಡತಿ: ಮತ್ತೆ ಏನು ತೊಂದರೆ, ತುಂಬಾ ಬಗ್(Error ) ಇದೆಯಾ ಅದರಲ್ಲಿ ಹಾಗಾದರೆ?. 
ಗಂಡ: ನಾನು ಸ್ಪೆಷಲ್ ಕೇರ್ ತಗೊಂಡು ಬರೆದೆ, ಹೊಸ ಟೆಕ್ನಿಕ್ಸ್ ಬಳಸಿದೆ, ತುಂಬಾ ಚೆನ್ನಾಗಿ ವರ್ಕ್ ಆಯ್ತು. 
ಹೆಂಡತಿ: ಹಾಗಾದ್ರೆ ಇನ್ನೇನ್ರಿ ತೊಂದ್ರೆ?
ಗಂಡ: ನಂಗೆ ತುಂಬ ದಣಿವಾಗಿತ್ತು ಅದಷ್ಟೂ ಮುಗಿಸಿದಮೇಲೆ, ಅಲ್ಲೇ ಕೊಂಚ ನಿದ್ದೆ ಮಾಡಲು ಬಯಸಿದೆ,
5 ನಿಮಿಷಕ್ಕೆ ಅಷ್ಟೇ..
ಹೆಂಡತಿ: ಓಹ್ ಆಯಾಸವಾಗಿದೆಯಾ, ತುಂಬಾ ನಿದ್ದೆಗೆಟ್ಟಿರಿ ಅನ್ನಿಸುತ್ತೆ...ಹೆಂಡತಿ ಉಸುರಿದಳು.
ಗಂಡ: ಇಲ್ಲಾ ಮಾರಾಯ್ತೀ ನಿದ್ದೇನೂ ಮಾಡ್ದೆ, ಆದ್ರೆ ಕೈ ಬ್ಯಾಕ್-ಸ್ಪೇಸ್(ಅಳಿಸುವ) ಕೀ ಮೇಲಿತ್ತು...!!!             
  


  

ಭಾನುವಾರ, ಮಾರ್ಚ್ 6, 2011

ನೆರೆ

ಅರ್ಧ ಕಟ್ಟಿದಂತ ಗೋಡೆ,
ಮಧ್ಯೆ ನಿಂತ ಕಂಬ,
ಮೇಲಿಲ್ಲ ಸೂರು,
ಸುತ್ತಲೂ ನೀರು ..

               ಯಾರೋ ಕಿರುಚಿದ ಸದ್ದು,
               ಎದ್ದು ನೋಡಿದಳು 
               ಮುದ್ದು ಕಂದಮ್ಮ;
               ತೇಲಿಹೋಗಿದ್ದಳು ತಾಯಿ .

ಮಗಳ ಮದುವೆಯ ಹಣ,
ಕೂಡಿಟ್ಟ ಕಾಸು,
ಮೊನ್ನೆ ಕೊಂಡ ಬೈಕು,
ಒಂದೂ ಉಳಿದಿಲ್ಲ
ಕೊನೆಗೆ ಮಗಳೂ..

               ಹದಗೊಳಿಸಿದ್ದ ಹೊಲ
               ಮುಳುಗಿ ಮೆದುವಾಗಿದೆ
               ನಾಡಿಗೆ ಉಣಿಸಿದ-ಕೈ
               ನೆರೆಗೆ ನಲುಗಿದೆ.

ಉಹುಂ, ಒಬ್ಬರೂ 
ಅಳಲೊಲ್ಲರು;
ಇರುವ ನೀರಿಗೆ 
ಕಣ್ಣ ಹನಿಗಳು ಸೇರಿ 
ಎಲ್ಲಿ ದುಮ್ಮಿಕ್ಕುವುದೋ 
ಎಂಬ ಭಯ !..

               ಕಟ್ಟಿ ನಿಲ್ಲಿಸಿದ 
               ಮನೆಯ ಬಿಟ್ಟು,
               ಉಟ್ಟ ಬಟ್ಟೆಯಲಿ ಹೊರಟವಗೆ,
               ಬದುಕ ಕಟ್ಟುವ ಆಸೆ!..


(ಸಂದರ್ಭ- ಹಿಂದಿನ ವರ್ಷ ಕರ್ನಾಟಕ ನೆರೆಹಾವಳಿಗೆ ಒಳಗಾದಾಗ ಬರೆದ ಕವನವಿದು)
ಅಂದಹಾಗೆ ಶಿರಸಿ ವೆಬ್ಸೈಟ್ ನಲ್ಲಿ ಕೂಡ ಈ ಕವನ ಲಭ್ಯ- 

http://sirsi.in/kannada/index.php?option=com_content&view=category&layout=blog&id=38&Itemid=66&limitstart=20

ಪ್ರೀತಿಯಾ ದೋಣಿ

ನನ್ನ ಹೃದಯವೊಂದು ಹಾಯಿದೋಣಿ -ಅದು-
ತಲುಪಬೇಕಿರುವ ಗಮ್ಯ ಕಂಡರೂ-ಕಾಣದಂತಿದೆ.
ಕಡಲಬ್ಬರದಾ ಮೊರೆತ ಮರೆಸೀತೆ ಹೃದಯ ಬಡಿತ 
ಹುಚ್ಚು ಮನಸಿದು, ಬಿಡದು ನಿನ್ನೆಡೆಗಿನಾ ತುಡಿತ!!!

ಒಲುಮೆಯ ಒಡತಿ ಬಂದುಬಿಡು ಮೆಲ್ಲ ನಾನಿದ್ದಲ್ಲಿಗೆ
ಕಡಲ ಕಿನಾರೆಯಲಿ ಕಾಣದೇನೆ ನಾ ಚೆಲ್ಲಿರುವ ಮಲ್ಲಿಗೆ?.
ನಲ್ಲೆ ನೀನು ಮೆಲ್ಲ ಬಂದು ಏರು ಪ್ರೀತಿಯಾ ದೋಣಿ 
ಸುಖಸಾಗರ ದಾಟಿ ಸೇರೋಣ ನಾವು ಪ್ರೇಮ ಪರ್ವತಶ್ರೇಣಿ.