ಭಾನುವಾರ, ಮಾರ್ಚ್ 6, 2011

ನೆರೆ

ಅರ್ಧ ಕಟ್ಟಿದಂತ ಗೋಡೆ,
ಮಧ್ಯೆ ನಿಂತ ಕಂಬ,
ಮೇಲಿಲ್ಲ ಸೂರು,
ಸುತ್ತಲೂ ನೀರು ..

               ಯಾರೋ ಕಿರುಚಿದ ಸದ್ದು,
               ಎದ್ದು ನೋಡಿದಳು 
               ಮುದ್ದು ಕಂದಮ್ಮ;
               ತೇಲಿಹೋಗಿದ್ದಳು ತಾಯಿ .

ಮಗಳ ಮದುವೆಯ ಹಣ,
ಕೂಡಿಟ್ಟ ಕಾಸು,
ಮೊನ್ನೆ ಕೊಂಡ ಬೈಕು,
ಒಂದೂ ಉಳಿದಿಲ್ಲ
ಕೊನೆಗೆ ಮಗಳೂ..

               ಹದಗೊಳಿಸಿದ್ದ ಹೊಲ
               ಮುಳುಗಿ ಮೆದುವಾಗಿದೆ
               ನಾಡಿಗೆ ಉಣಿಸಿದ-ಕೈ
               ನೆರೆಗೆ ನಲುಗಿದೆ.

ಉಹುಂ, ಒಬ್ಬರೂ 
ಅಳಲೊಲ್ಲರು;
ಇರುವ ನೀರಿಗೆ 
ಕಣ್ಣ ಹನಿಗಳು ಸೇರಿ 
ಎಲ್ಲಿ ದುಮ್ಮಿಕ್ಕುವುದೋ 
ಎಂಬ ಭಯ !..

               ಕಟ್ಟಿ ನಿಲ್ಲಿಸಿದ 
               ಮನೆಯ ಬಿಟ್ಟು,
               ಉಟ್ಟ ಬಟ್ಟೆಯಲಿ ಹೊರಟವಗೆ,
               ಬದುಕ ಕಟ್ಟುವ ಆಸೆ!..


(ಸಂದರ್ಭ- ಹಿಂದಿನ ವರ್ಷ ಕರ್ನಾಟಕ ನೆರೆಹಾವಳಿಗೆ ಒಳಗಾದಾಗ ಬರೆದ ಕವನವಿದು)
ಅಂದಹಾಗೆ ಶಿರಸಿ ವೆಬ್ಸೈಟ್ ನಲ್ಲಿ ಕೂಡ ಈ ಕವನ ಲಭ್ಯ- 

http://sirsi.in/kannada/index.php?option=com_content&view=category&layout=blog&id=38&Itemid=66&limitstart=20

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ