ಗುರುವಾರ, ಅಕ್ಟೋಬರ್ 6, 2011

ಮೋಡ ಕಟ್ಟೋದು ಆವಿಯಲ್ಲೇ; ಪ್ರೀತಿ ಹುಟ್ಟೋದು ಕಣ್ಣಿನಲ್ಲೇ!




ಸಂಜೆ ಆರಕ್ಕೆ ಬೆಟ್ಟದ ನೆತ್ತಿಯ ಮೇಲೆ ನಿಂತಿದ್ದೆ; ಎತ್ತ ನೋಡಿದರತ್ತ ಮುತ್ತಿನಂತ ಮಳೆಹನಿ! ಸಂಜೆ ಮಳೆಯು ಮಲೆನಾಡ ಕನ್ನೆಲವನ್ನ ತೋಯ್ದು ತಂಪಾಗಿಸಿದ್ದವು, ಸೂರ್ಯ ಕರಗಿದಷ್ಟೂ-ಮಂಜು ಮೆರಗು ಪಡೆಯ ಹತ್ತಿತ್ತು. ಆಗಸದೆಡೆಗೆ ಧನ್ಯವಾದ ಹೇಳಿ ಹೊರಟಿದೆ ಆವಿ, ನಾನಗಿದ್ದೆ ಮುಸ್ಸಂಜೆಯಲ್ಲಿ ಅಕ್ಷರಶಃ ಕವಿ.

ನವನೀತದಂತ ವಿನೀತ ಮೋಡಗಳ ನಡುವೆ ಮಿಂಚಿನ ಸಂಚಲನ. ಸುಖವನ್ನ ಸುರಿದುಕೊಂಡ ಮಲೆನಾಡಿನ ಒಡಲಿನದ್ದು ಕೃತಾರ್ಥ ಭಾವ; ವಾತಾವರಣದ ತುಂಬೆಲ್ಲ ಸಂತಸದ ತೇವ. ಶುಭ್ರ ಆಗಸಕ್ಕೆ ಸೂರ್ಯನ ವಿದಾಯ ಸಂದಾಯವಾಗುತ್ತಿದೆ, ಭೂಮಿಯದು ಮಾತ್ರ ಒಲ್ಲದ ಮನಸ್ಸಿನ ಮೆಲ್ಲನೆ ಬೀಳ್ಕೊಡುಗೆ! ನಕ್ಷತ್ರ ಮೂಡುವ ಸಮಯಕ್ಕೂ ಮುಂಚೆ ಭೂಮಿಯದ್ದು 
ಎಂದಿನಂತೆಯೇ ಅಪ್ಪಟ ನಾಚಿಕೆ! ಮಳೆಯಲ್ಲಿ ಮಿಂದ ತಂಗಾಳಿ ಎಂದಿಗಿಂತ ಕೊಂಚ ಬಿರುಸು. ಮಣ್ಣಿನ ಘಮವನ್ನೆಲ್ಲ
ಒಳಗೊಂಡುಬಿಡುವ ರಭಸವಿರಬೇಕು. ತೊಯ್ದ ತರಗೆಲೆಗಳಿಂದ ತೊಟ್ಟಿಕ್ಕುವ ಹನಿಗೆ ಮಣ್ಣ ಮಡಿಲ ಸೇರುವ ತವಕ,
ಮಣ್ಣ ಕಣ ಕಣಕ್ಕೂ ಮನಮೋಹಕ ಪುಳಕ. ಪಟ ಪಟನೆ ರೆಕ್ಕೆ ಬಡಿವ ಚಿಟ್ಟೆಗಳೂ, ಬಾನಂಗಳದ ಒಡನಾಡಿ ಬಾನಾಡಿಗಳು 
ಗೂಡ ಸೇರ-ಹೊರಟಿವೆ. ನವಿಲ ಕೇಕೆ ನಿಂತಿದೆ! 

ಇಂತಿರಲು ಮಳೆ- ಜಿರಳೆ ಮಾತ್ರ ಸುಮ್ಮನಿರದು; ಅದರ ವಿರಹವ ಅರಿಯುವರಾರಿಲ್ಲ! ನಿಂತ ಮಳೆಯೆಡೆಗಿನ ನಿರಂತರ 
ಧಿಕ್ಕಾರ : ಕೋಪಿಸಿಕೊಂಡ ಪ್ರೇಮಿಯ ತಿರಸ್ಕಾರದಂತಿದೆ! ಸುರಿವ ಮಳೆ ಹಾಗು ಅವಿಯೊಡಲಲಿ ಹುಟ್ಟುವ ಮೋಡ ಇವೆರಡು ಪರಸ್ಪರರ ಪ್ರೇಮ ನಿವೇದನೆ. ಅಂತೆಯೇ ಅವನ ಕಂಗಳ ಯಾಚನೆ; ಇವಳ ಕಂಗಳ ಸಂಕೋಚ ಇವೆರಡೂ ಹೇಳುತ್ತಿವೆ:
     
"ಮೋಡ ಕಟ್ಟೋದು ಆವಿಯಲ್ಲೇ; ಪ್ರೀತಿ ಹುಟ್ಟೋದು ಕಣ್ಣಿನಲ್ಲೇ!"







11 ಕಾಮೆಂಟ್‌ಗಳು:

  1. Just Awesome..:)


    "ಮೋಡ ಕಟ್ಟೋದು ಆವಿಯಲ್ಲೇ; ಪ್ರೀತಿ ಹುಟ್ಟೋದು ಕಣ್ಣಿನಲ್ಲೇ!"

    ಪ್ರತ್ಯುತ್ತರಅಳಿಸಿ