ಶನಿವಾರ, ಜೂನ್ 18, 2011

"ಮಲೆನಾಡ ಮಳೆ"



ಮೊದಲ ಮಳೆಗೆ
ತೋಯ್ದಳು 'ಇಳೆ';
ಇಳೆಯಾದಳು-'ಪರಿಮಳೆ';
ಕಾರಣ ಆ ಪರಿ- 'ಮಳೆ'!.

ಮೋಡ ಮುಸುಕಿದ ದಿನ
ಸೂರ್ಯನದೂ ಸೋಮಾರಿತನ.
ಗುಡುಗಿನದು:  ಆರ್ಭಟ
ಮಳೆ ಬಿಡದು: ತನ್ನ ಹಠ.

ಮಕ್ಕಳಿಗೆ ಶಾಲೆ-ರಜೆಯೆಂಬ ಖುಷಿ
ಹೆಗಡೇರಿಗೊಂದೇ ತಲೆಬಿಸಿ,
ಎಲ್ಲಿ ಬಂದು ಬಿಡತ್ತೋ-
ತಮ್ಮ ತೋಟಕ್ಕೂ 'ಕೊಳೆ'.

ರಸ್ತೆ ಮದ್ಯೆ ಅಲ್ಲಲ್ಲಿ ನಿಲ್ಲಿಸಿದ ನೀರು,
ಕಾರಣ ಮಕ್ಕಳೇ ಕಟ್ಟಿದ ಆಣೆಕಟ್ಟೆ.
ಗಣಿತದ ಪಟ್ಟಿ ಹರಿವ ಮಾಣಿ
ನಿತ್ಯ ತೇಲಿ ಬಿಡುವ- 'ದೋಣಿ'.

ಬೇಡವೆಂದರೂ ಬೆರಳ ಸಂದಿಗೇ
ಹೋಗುತ್ತದೆ ನಿಮ್ಮ ದೃಷ್ಟಿ;
ಕಾರಣ, 'ಇಂಬಳ'ವೆಂಬ
ಮಳೆಗಾಲದ್ದೇ ಅದ್ಭುತ 'ಸೃಷ್ಟಿ!'.

ಓಳಿ ತುಂಬಿದ ಸ್ವಾಣೆ,
ರಾತ್ರಿ ಅರಳುವ ಬ್ರಹ್ಮ ಕಮಲ,
ಮಲೆನಾಡ ಅಂಗಳಕ್ಕೆ-
ತುಂಬಿದ ಪ್ರಾಯ...

ಕೂಸು ಮುಡಿವಳು
ತಲೆತುಂಬುವ ಡೇರೆ.
ಆದರೂ ಅಣ್ಣನ್ನ ಕೇಳ್ತಾಳೆ-
ತಂದುಕೊಡು ಮರವೇರಿ 'ಸೀತಾಳೆ'.

ಹೊಡ್ತ್ಲು ಮೇಲೆ ಹರವಿದ ಕಂಬಳಿ
ಹಲಸಿನ ಬೇಳೆ ಸುಡುವಾಗ ಅಪ್ಪನ ಗೊಣಗಾಟ:
"ಮದ್ದು ಕರಡಿಟ್ಟಿದ್ದಿ....
ಗೌಡ ನಾಳೆ ಆದ್ರೂ ಬತ್ನ ಎಂತದನ!?.

-ಗುರುಪ್ರಸಾದ್ ಹೆಗಡೆ




             

 
 



7 ಕಾಮೆಂಟ್‌ಗಳು:

  1. ಚನ್ನಾಗಿದೆ.. ಸ್ವಾರಸ್ಯಕರವಾಗಿ ಮೂಡಿಬಂದಿದೆ..

    ಪ್ರತ್ಯುತ್ತರಅಳಿಸಿ